ಪ್ರತಿಯೋಬ್ಬರೂ ಅವರವರ ಜೀವಮಾನದಲ್ಲಿ ಕೆಲವು ತಮಾಷೆಗೆ ಈಡಾದ, ಬೇಸ್ತಿಗೆ ಬಿದ್ದ, ಕಂಗಾಲಾದ, ಮುಜುಗರಕ್ಕೆ ಒಳಗಾದ, ಸನ್ನಿವೇಶಗಳನ್ನು ಅನುಭವಿಸಿಯೇ ಇರ್ತಾರೆ. ಅದನ್ನು ಕೆಲವರು ನೆನಪಲ್ಲಿ ಇಟ್ಟಕೊಂಡು ಸಂದರ್ಭ ಬಂದಾಗ ಜ್ಞಾಪಿಸಿಕೊಳ್ಳುತ್ತಾರೆ, ಹಂಚಿಕೊಳ್ಳುತ್ತಾರೆ. ನನ್ನ ಕೇಸ್ ನಲ್ಲಿ ನಾನು ಹೇಳಬೇಕು ಅಂತ ಇಟ್ಟಕೊಂಡು ಹೇಳದೆ ಮರೆತು, ಕ್ರಮೇಣ ನಾನೂ ಆ ಸನ್ನಿವೇಶಗಳನ್ನೇ ಮರೆಯೋ ಸ್ಥಿತಿ ಆಗಿದೆ. ಇಷ್ಟು ವರ್ಷದಲ್ಲಿ ಬಾಲ್ಯದಿಂದ ಅದೇನೇನು ತಮಾಷೆ ಗಿಮಾಷೆ ಅನುಭವಿಸಿದ್ದೇನೋ ಮುಕ್ಕಾಲು ಭಾಗ ಮರೆತು ಹೋಗಿದೆ. ನಮ್ಮ ದೇಶದಲ್ಲಿ ಆಗಿದ್ದ ಘಟನೆ ಅಂತಲೋ ಏನೋ. ಆದ್ರೆ ವಿದೇಶಗಳಲ್ಲಿ ಸುತ್ತಾಡಿದಾಗ ಆಗಿದ್ದ ಘಟನೆಗಳು ಮಾತ್ರ ಸ್ಪೆಷಲ್ ಆಗಿ ಸದ್ಯಕ್ಕೆ ಕೆಲವೊಂದಿಷ್ಟು ನೆನಪಿವೆ! ಇಲ್ಲೊಂದಿಷ್ಟು ಮರೆಯದೆ ಇರೋ ಒಂದಿಷ್ಟು ಸನ್ನಿವೇಶಗಳನ್ನು ಹಂಚಿಕೊಳ್ಳೋಣ ಅಂತ ತೀರ್ಮಾನ. ನಾಳೆ ನಮ್ಮ ದೇಶಕ್ಕೆ ಹೋದಮೇಲೆ ಅದೂ ಮರೆತು ಹೋಗದೆ ಇರ್ಲಿ ಅಂತ. ಈ ಬರಹವನ್ನು ಕಂತು ಕಂತಾಗಿ ಬರೆಯೋಣ, ಎಲ್ಲರಿಗೂ ಒಂದೇ ಸಮನೆ ನನ್ನ ಪ್ರವರ ಓದಿ ಸುಸ್ತು ಆಗಬಾರದು ಅಂತ ಉದ್ದೇಶ...
ಸನ್ನಿವೇಶ ೧ - ನಾವು ಲಂಡನ್ ನಲ್ಲಿ ಇದ್ದಾಗ, ಸ್ಟ್ರಾಟ್ಫೋರ್ಡ್ -ಎಪೋನ್-ಎವೊನ್ ಎಂಬ ೩ ಜಾಗಗಳ ಕಂಡಕ್ಟೆಡ್ ಟೂರ್ ಹೋಗೋಣ ಅಂತ ತೀರ್ಮಾನಿಸಿದ್ದ್ವಿ. ಸರಿ, ನಾನೂ, ಇವರೂ ಇಂಟರ್ನೆಟ್ ನಲ್ಲಿ ನೋಡಕ್ಕೆ ಶುರು ಮಾಡಿದ್ವಿ. ಒಂದು ೩-೪ ಬಸ್ ಟೂರ್ ಇಷ್ಟ ಆಯಿತು. ಕೊನೆಗೆ ಒಂದು ಟೂರ್ ಗಮನ ಸೆಳೆಯಿತು, ಏಕೆಂದರೆ ಆ ಟೂರ್ನಲ್ಲಿ , ಟೂರ್ ಕೊನೆಯಲ್ಲಿ ಆಪಲ್ ಸ್ಕೊನ್ಸ್ ( ಒಂದು ಬಗೆ ಸಿಹಿ ಬ್ರೆಡ್ಡು ) ಮತ್ತು ಕ್ರೀಂ ಟೀ ಕೊಡ್ತಿವಿ ಅಂತ ಹಾಕಿದ್ದರು.ನಾನೋ ಮೊದಲೇ ತಿಂಡಿ ಪೋತಿ, ಇದೇ ಇರಲಿ ಅಂತ ಹಠ ಮಾಡಿದೆ. ಅಂತೂ, ೩ ಜಾಗಗಳ ದರ್ಶನ ಆಯಿತು, ಚಳಿ ಬೇರೆ, ಗಟ್ಟಿ ಕ್ರೀಂ ಟೀ ಗೆ ಕಾಯ್ತಾ ಇದ್ದೆ. ಒಂದೆಡೆ ಕರ್ಕೊಂಡು ಹೋದರು. ಅಲ್ಲಿ ಕ್ರೀಂ ಟೀ ಬಂತು!! ಏನಪ್ಪಾ ಅಂತ ಆಸೆ ಇಂದ ನೋಡಿದ್ರೆ, ದೊಡ್ಡ ಜಾರ್ ನಲ್ಲಿ ಬಿಸಿ ನೀರಲ್ಲಿ ಕುದಿಸಿದ ಟೀ ಮತ್ತು ಚಿಕ್ಕ ಲೋಟ ತರ ಇರೋದ್ರಲ್ಲಿ ತಣ್ಣನೆ ಗಟ್ಟಿ ಹಾಲು. ಇದೇ ಇಲ್ಲಿನ "ಕ್ರೀಂ ಟೀ" ಟೀ ಡಿಕಾಕ್ಷನ್ ಕಪ್ಗೆ ಹಾಕ್ಕೊಂಡು, ತಣ್ಣನೆ ಹಾಲು ಬೆರೆಸಿ, ಒಂದಿಷ್ಟು ಸಕ್ಕರೆ ಕ್ಯೂಬ್ ಹಾಕಿ ಕದಡಿ ಕುಡೀಯೋದು! ಕ್ರೀಂ ಅಂದರೆ ಹಾಲು ಅಂದು ಅರ್ಥ! ನಾನೇನೋ, ಗಟ್ಟಿ ಒಳ್ಳೆ ಹಾಲಲ್ಲಿ ( ಸ್ಪೆಷಲ್ ಇಂಗ್ಲಂಡ್ ಹಸುವಿನ ಹಾಲು )ಒಂದು ಒಳ್ಳೆ ಇಂಗ್ಲೆಂಡ್ ಟೀ ಪುಡಿ ಹಾಕಿ ಕುದಿಸಿರೋ ಘಮ ಘಮ ಟೀ ಕುಡೀಬೋದು ಅಂತ ಲೆಕ್ಕ ಹಾಕಿದ್ದೆ. ಈ ಹಾಲೇನೋ ಒಳ್ಳೆ ಗಟ್ಟಿ ಆಗಿ ಇತ್ತು, ಆದರೆ ತಣ್ಣನೆ ಹಾಲು ಕೊಟ್ಟಿದ್ದರು. ಡಿಕಾಕ್ಷನ್ ಎಷ್ಟೇ ಬಿಸಿ ಇದ್ದರೂ ಈ ಹಾಲು ಹಾಕಿದ ಕೂಡ್ಲೇ ತಣ್ಣನೆ ಟೀ ಆಗ್ತಿತ್ತು. ತುಂಬಾ ಭ್ರಮ ನಿರಸನ ಆಗಿಹೋಯ್ತು. ಕೊನೆಗೆ ಇವರುಗಳ ಕ್ರೀಮೂ ಬೇಡ ಏನೂ ಬೇಡ ಅಂತ, ಬರೀ ನೀರು ಟೀ ಡಿಕಾಕ್ಷನ್ ಕುಡಿದದ್ದಾಯ್ತು. ಆದ್ರೆ ಆಪಲ್ ಸ್ಕೊನ್ಸ್ ಚೆನ್ನಾಗಿತ್ತು, ಅದೂ ತಣ್ಣಗಿತ್ತು. ಆಮೇಲೆ ಫಾರಿನ್ ನಲ್ಲಿ ಹೀಗೆ ಟೀ, ಕಾಫಿ ಕುಡ್ಯೋದು ಅಂತ ಗೊತ್ತಾಯ್ತು ಅಂತ ಇಟ್ಟಕೊಳ್ಳಿ. ಸದ್ಯ ಬೇರೆ ಟೂರ್ ಗೂ ಈ ಟೂರ್ ಗೂ ದುಡ್ಡು ಸ್ವಲ್ಪ ವ್ಯತ್ಯಾಸ ಇದ್ದದ್ದರಿಂದ ಅಷ್ಟೇನೂ ಹೊಟ್ಟೆ ಉರೀಲಿಲ್ಲ!
ಸನ್ನಿವೇಶ ೨ : ಲಂಡನ್ ನಲ್ಲಿ ಮೇಡಂ ಟುಸ್ಸಾದ್ ಅಂತ ವ್ಯಾಕ್ಸ್ ಮ್ಯೂಸಿಯಂ ಇದೆ. ಅಲ್ಲಿ ಖ್ಯಾತನಾಮರ ಮೇಣದ ಪ್ರತಿಕೃತಿ ಮಾಡಿದ್ದಾರೆ. ನಮ್ಮ ಅಮಿತಾಭ್, ಐಶ್ವರ್ಯ, ಶಾರುಖ್ ಇತ್ಯಾದಿ ಖ್ಯಾತನಾಮರ ಪ್ರತಿಕೃತಿ ಸಹಾ ಇದೆ. ಅಲ್ಲಿಗೆ ಹೋಗಿದ್ದಾಯ್ತು. ಹಾಗೇ, ಅಲ್ಲಿ ಚೇಂಬರ್ ಆಫ್ ಹಾರರ್ ಅಂತ ಮಾಡಿದ್ದಾರೆ. ಅಲ್ಲಿ ಒಳಗೆ ಹೋದರೆ, ಇದ್ದಕ್ಕಿದ್ದಂತೆ ದೆವ್ವಗಳ ವೇಷ ಹಾಕಿಕೊಂಡ ಜನ ಎಲ್ಲಿಂದಲೋ ಬಂದು ವಿಕಾರವಾಗಿ ಕೂಗಿ ಹತ್ತಿರ ಬರುತ್ತಾರೆ. ನಾನೋ ತುಂಬಾ ಹೆದರು ಪುಕ್ಲಿ. ಇವರು ಬಿಡಲಿಲ್ಲ, ಎಳ್ಕೊಂಡು ಹೋದ್ರು. ತುಂಬಾ ಹೆದರಿಕೆ ಆಗ್ತಿತ್ತು. ಒಳಗೆ ಕತ್ತಲೋ ಕತ್ತಲು, ಗುಹೆ ಹಾಗೇ ಇದೆ, ನಿಧಾನಕ್ಕೆ ಹೋಗಬೇಕು, ಏಕೆಂದರೆ ಎಲ್ಲಿ ದೆವ್ವ ಬರತ್ತೋ ಅಂತ.ಸ್ವಲ್ಪ ದೂರ ಹೋದ್ವಿ, ಒಂದು ದೆವ್ವ ಬಂದೇ ಬಿಡ್ತು ನನ್ನ ಹತ್ರ.. ನಂಗೆ ತಡೆದುಕೊಳ್ಳಕ್ಕೆ ಆಗ್ಲೇ ಇಲ್ಲ. ನನ್ನ ಶಕ್ತಿ ಮೀರಿ, ಭಯಂಕರವಾಗಿ ಅರಚಿಬಿಟ್ಟೆ!! ನನ್ನ ಕೂಗಾಟ ದೆವ್ವಕ್ಕೆ ವಿಕಾರವಾಗಿ ಕೇಳಿಸ್ತು ಅನ್ನಿಸತ್ತೆ, ಅದೇಬೆಚ್ಚಿ ೨-೩ ಹೆಜ್ಜೆ ಹಿಂದಕ್ಕೆ ಹೋಗಿಬಿಡ್ತು... ಆಮೇಲೆ, ತಲೆ ಬಗ್ಗಿಸಿ..."ದಯವಿಟ್ಟು ಮುಂದಕ್ಕೆ ಹೋಗಿ " ಅಂದಿತು!!!! ಇಂಥಾ ಭೀಕರ ದೆವ್ವವನ್ನೇ ಹೆದರಿಸಿಬಿಟ್ಟೆ ಅಂತ ನೂರಾನೆ ಬಲ ಬಂದಹಾಗೆ ಆಯಿತು ನಂಗೆ, ಆರಾಮವಾಗಿ ಮುಂದೆಲ್ಲ ಸಿಕ್ಕ ದೆವ್ವಗಳನ್ನು ನೋಡಿ ಹಾಯ್ ಹೇಳಿ ಬಂದೆ :)
ಸನ್ನಿವೇಶ ೩ : ಲಂಡನ್ ನಿಂದ ಪ್ಯಾರಿಸ್ ಗೆ ಯುರೋ ಸ್ಟಾರ್ ಎನ್ನೋ ಅತ್ಯಂತ ವೇಗದ ಸುರಂಗ ರೈಲಲ್ಲಿ ಹೋಗಿದ್ದೆವು. ಲಂಡನ್ ವೀಸಾ ಕಚೇರಿ ಯಲ್ಲಿ ೩ ದಿನ ಪ್ಯಾರಿಸ್ ಗೆ ಹೋಗಿ ಮಜಾ ಮಾಡಿ ಅಂತ ವೀಸಾ ಕೊಟ್ಟಿದ್ದರು. ಪ್ಯಾರಿಸ್ ಎಲ್ಲಾ ಚೆನ್ನಾಗಿ ಸುತ್ತಿದೆವು.೩ ನೆ ದಿನ ಬ್ಯಾಸಿಲಿಕಾ ಆಫ್ ಸೇಕ್ರೆಡ್ ಹಾರ್ಟ್ ಅನ್ನೋ ಚರ್ಚ್ ಗೆ ಹೋದೆವು. ಅಮೆಲಿ ಅನ್ನೋ ಫ್ರೆಂಚ್ ಮೂವಿ ನೋಡಿದ್ದವರಿದ್ದರೆ, ಆ ಮೂವಿ ನಲ್ಲಿ ಈ ಚರ್ಚ್ ಬರತ್ತೆ. ಅಲ್ಲಿ ಚೆನ್ನಾಗಿ ಸುತ್ತಾಡಿ, ಅಲ್ಲೊಂದು ಇಂಡಿಯಾ ರೆಸ್ಟೋರಂಟ್ ನಲ್ಲಿ ಹೋಗಿ ಊಟಕ್ಕೆ ಅಂತ ಹೋಗಿ ಕೂತಿದ್ದೆವು, ಊಟವೂ ಸಾಂಗವಾಗಿ ಶುರು ಆಯಿತು. ನಮ್ಮ ಹೋಟೆಲ್ ಗೆ ಹೋಗಿ ತಕ್ಷಣ ಯುರೋಸ್ಟಾರ್ ನಿಲ್ದಾಣಕ್ಕೆ ಹೋಗಿ, ಲಂಡನ್ ಗೆ ಹೋಗೋದು ಅಂತ ಆಗಿತ್ತು.. ಒಂದೆರಡು ಗಂಟೆ ಸಮಯ ಇತ್ತು... ಊಟ ಮಾಡುತ್ತಿರುವಾಗ, ಯಾತಕ್ಕೋ ಇರಲಿ ಅಂತ ಟಿಕೆಟ್ ಚೆಕ್ ಮಾಡಿದ್ರೆ, ಯುರೋ ಸ್ಟಾರ್ ಇನ್ನು ೧೦ ನಿಮಿಷಕ್ಕೆ ಹೊರಡಲಿತ್ತು!!! ನಮ್ಮಿಬ್ಬರ ಹೃದಯ ಡವ ಡವ ಅನ್ನಲಿಕ್ಕೆ ಶುರು. ವೀಸಾ ಕೊಟ್ಟಿರೋದು ೩ ದಿನಕ್ಕೆ ಮಾತ್ರ, ನೂರಾರು ಪೌಂಡ್ ಕೊಟ್ಟು ಟಿಕೆಟ್ ಖರೀದಿಸಿದ್ದೆವು... ಕೆಟ್ಟೆನೋ ಬಿಟ್ಟೆನೋ ಅಂತ ಊಟ ಅಲ್ಲಿಗೆ ನಿಲ್ಲಿಸಿ, ಹೊರಗೆ ಓಡಲು ಶುರು ಮಾಡಿದೆವು... ನಮ್ಮಿಬ್ಬರ ಹೃದಯದಲ್ಲೂ ಮಡುಗಟ್ಟಿದ್ದ ಆತಂಕ ಹೇಳಲು ಸಾಧ್ಯ ಇರಲಿಲ್ಲ.. ನನ್ನ ಕಣ್ಣಲ್ಲೋ ಗಂಗಾ-ಭವಾನಿ ಶುರು.. ಒಬ್ಬರನ್ನೊಬ್ಬರು ಟಿಕೆಟ್ ಸಮಯ ನೋಡದೆ ಇದ್ದಿದ್ದಕ್ಕೆ ದೂಷಿಸಿದ್ದಾಯಿತು.. ನಾನು ಪಿ.ಟಿ ಉಷಾ ಳಂತೆ, ಇವರು ಉಸೈನ್ ಬೋಲ್ಟ್ ನಂತೆ ಓಡಿದೆವು.. ಅಂತೂ ಹೋಟೆಲ್ ನಿಂದ ಚೆಕ್ ಔಟ್ ಆಗಿ, ಯುರೋ ಸ್ಟಾರ್ ನಿಲ್ದಾಣಕ್ಕೆ ಬಂದೆವು.. ಅಲ್ಲಿ ನಾನು, ಅಧಿಕಾರಿಗಳು ಕೇಳಿದರೆ, ಹೆಣ್ಣಿನ ಪ್ರಬಲ ಅಸ್ತ್ರ ವಾದ " ಕಣ್ಣೀರು" ಅನ್ನು ತೋರಿಸಿ, ಗೋಗರೆಯಬೇಕು ಎಂದು ತೀರ್ಮಾನ ಮಾಡಿ, ಕಣ್ಣೀರನ್ನು ರೆಡಿ ಮಾಡಿಕೊಂಡು ಹೋದೆ. ಲಂಡನ್ ನಲ್ಲಿರೋ ದೇವಸ್ಥಾನಗಳಿಗೆಲ್ಲ ಹೋಗಿ ಕಾಯಿ ಒಡೆಸಿ ಅರ್ಚನೆ ಮಾಡಿಸುವ ಹರಕೆ ಕೇಳಿಕೊಂಡೆ....ಫ್ರೆಂಚರು ನನ್ನ ಕಣ್ಣೀರಕ್ಕೆಲ್ಲಾ ಬಗ್ಗೋಲ್ಲ ಅಂತ ಗೊತ್ತಿತ್ತು. ಕೈಲೊಂದು ಕರ್ಚೀಫ್ ರೆಡಿ ಮಾಡಿ, ನನ್ನ ಕಣ್ಣ ಕ್ರೆಸ್ಟ್ ಗೇಟ್ ಗಳನ್ನು ರೆಡಿ ಮಾಡಿಟ್ಟೆ. ನಮ್ಮ ಸರದಿ ಬಂದಾಗ, ಅಲ್ಲಿದ್ದ ಅಧಿಕಾರಿ ಟಿಕೆಟ್ ನೋಡಿ ನಮ್ಮಿಬ್ಬರನ್ನು ಒಮ್ಮೆ ದಿಟ್ಟಿಸಿ ನೋಡಿದ, ನನ್ನ ಕ್ರೆಸ್ಟ್ ಗೇಟ್ ಗಳು ರೆಡಿ ಅಂದವು.. ಆತ ಕಂಪ್ಯೂಟರ್ ನತ್ತ ನೋಡಿ ಸ್ವಲ್ಪ ಸಮಯದ ನಂತರ ಹೊರಡಲಿದ್ದ ಮುಂದಿನ ಯುರೋಸ್ಟಾರ್ ಗೆ ತಣ್ಣಗೆ ಮಾತಿಲ್ಲದೆ ಟಿಕೆಟ್ ಕೊಟ್ಟೆ ಬಿಟ್ಟ!!. ನನಗೋ ಭಾರೀ ಆಘಾತ.. ಇಷ್ಟು ದೊಡ್ಡ ಸಮಸ್ಯೆ ಹೂವೆತ್ತಿದ ಹಾಗೆ ಸಲೀಸಾಗಿ ಕರಗಿ ಹೋಯಿತಲ್ಲ, ನಾನು ಎಷ್ಟೆಲ್ಲಾ ರೆಡಿ ಆಗಿದ್ದೆ ಎಂದು .. ಯುರೋ ಸ್ಟಾರ್ ಗೆ ಹೋಗಿ ಕೂತಾಗ ರೆಡಿ ಅಗಿಟ್ಟಿದ್ದ ಕ್ರೆಸ್ಟ್ ಗೇಟ್ ಗಳಿಗೆ ನಿರಾಶೆ ಆಗಬಾರದು ಎಂದು ಅವನ್ನು ಮನಸೋ ಇಚ್ಛೆ ಬಿಟ್ಟಿದ್ದಾಯಿತು :)
( ಮುಂದಿನ ಸನ್ನಿವೇಶ ಗಳು ಮುಂದಿನ ಕಂತಲ್ಲಿ)
Kama in the Vishnusahasranama
20 years ago