ನಾನು ಸುಮಾರು ವರ್ಷಗಳಿಂದ ಅಮೆರಿಕೆಯಲ್ಲಿ ಇದ್ದು, ಕೆಲವೊಮ್ಮೆ ನನ್ನವರ ಕಂಪನಿ ಪಾರ್ಟಿಗಳಿಗೆ ಹೋಗಿದ್ದೇನೆ, ಅಲ್ಲಿ ಇವರ ವಿದೇಶಿ ಗೆಳೆಯ ಗೆಳತಿಯರನ್ನು ಮಾತಾಡಿಸಿದ್ದೇನೆ. ಅವರೂ ಒಂದಿಷ್ಟು ಭಾರತದ ಬಗ್ಗೆ ಕೇಳಿದ್ದಾರೆ, ಹೇಳಿದ್ದೇನೆ. ಅಲ್ಲಿಗೆ ಮುಗಿದಿತ್ತು. ಇತ್ತೀಚೆಗೆ, ನನಗೆ ಪರಿಚಯವಾದ ಈಜಿಪ್ಟ್ ಮೂಲದ ಗೆಳತಿ ಬಹಳ ಕುತೂಹಲ ಸ್ವಭಾವದವಳು. ಅವಳಿಗೆ ಸಮಾಜಶಾಸ್ತ್ರ ಭಾರೀ ಇಷ್ಟ. ನಾನೋ, ಸಮಾಜ ಶಾಸ್ತ್ರ ಅಂದರೆ ಮೈಲು ದೂರ ಓಡುವವಳು. ಚಿಕ್ಕವಳಿದ್ದಾಗ, ಹಾಗೂ ಹೀಗೂ ಸಮಾಜಶಾಸ್ತ್ರ ವನ್ನು ಒಂದು "ಶಾಸ್ತ್ರ" ವಾಗಿ ಓದಿ, ಉರು ಹೊಡೆದು ತೇರ್ಗಡೆ ಆಗಿ ನಿಟ್ಟುಸಿರುಬಿಟ್ಟವಳು .
ನನ್ನ ಗೆಳತಿ ಪ್ರತಿ ದಿನ ಭಾರತ ದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹಾಕುತ್ತಿದ್ದಳು. ಎಷ್ಟೆಲ್ಲ ಕ್ಲಿಷ್ಟ ಪ್ರಶ್ನೆಗಳು, "ಭಾರತ" ಹೆಸರು ಹೇಗೆ ಬಂತು, ಬ್ರಿಟಿಷರ ಆಳ್ವಿಕೆ, ಪಾಕಿಸ್ತಾನ್-ಬಾಂಗ್ಲಾ ವಿಭಜನೆ, ಗಾಂಧೀ, ಹಿಂದೂಗಳು, ಅವರ ಜಾತಿಗಳು,ಉಪಜಾತಿಗಳು, ಮರಿ ಜಾತಿಗಳು, ಭಾಷೆಗಳು, ವೇದ ಗಳು,ವರ್ಣಭೇದಗಳು, ಸಂಸ್ಕಾರ, ಹಬ್ಬಗಳು, ಅಸಂಖ್ಯಾತ ದೇವರುಗಳು, ಕೋಮುವಾದ, ದಲಿತರ ಬಗ್ಗೆ ಕೀಳು ಮನೋಭಾವ , ಹಿಂದೂ-ಮುಸ್ಲಿಂ ಗಲಾಟೆ, ಬಾಬರಿ ಮಸೀದಿ ಗಲಾಟೆ, ಈಗಿನ ರಾಜಕೀಯ ಪರಿಸ್ಥಿತಿ, ಭೃಷ್ಟ ರಾಜಕಾರಣಿಗಳು ಹೀಗೆ ಒಂದೇ-ಎರಡೇ ೧೦೦ ಪ್ರಶ್ನೆಗಳು. ಅವಳಿಗೆ ಸರಿಯಾಗಿ ಹೇಳಲು ನಾನು ತಡಬಡಾಯಿಸಿದ್ದು , ನನ್ನ ಮರ್ಯಾದೆ ಮಣ್ಣು ಪಾಲಾಗಬಾರದು ಎಂದು "ವಿಕಿಪೀಡಿಯ" ದಲ್ಲಿ ಮತ್ತೆ ಮನದಲ್ಲಿ ಎಂದೋ "ಗುಡ್ ಬೈ" ಹೇಳಿದ್ದ ಸಮಾಜ ಶಾಸ್ತ್ರ ವನ್ನು ಓದಲು ಶುರು ಮಾಡಿದ್ದೂ ಆಯಿತು.. ಓದಿದ್ದನ್ನ, ಸರಳ ವಾಗಿ ಅವಳಿಗೆ ಅರ್ಥವಾಗುವ ಹಾಗೆ ಹೇಳಲು ಹರ ಸಾಹಸ ಮಾಡಿದ್ದೂ ಆಯಿತು. ಅವಳ ಆಶ್ಚರ್ಯಕ್ಕೆ ಪಾರವೇ ಇಲ್ಲ. ಕೇವಲ ಒಂದು ದೇಶದಲ್ಲಿ ಜನ, ಸಂಸ್ಕೃತಿ, ಭಾಷೆ, ಹಾಗೂ ಆಹಾರ ಇಷ್ಟೊಂದು ವೈವಿಧ್ಯತೆಯಿರಲೂ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳು ಇಟ್ಟಳು. ಹಾಗೂ ಮುಂದೊಮ್ಮೆ ಭಾರತಕ್ಕೆ ಭೇಟಿ ನೀಡುವ ಇಚ್ಛೆ ಯನ್ನೂ ವ್ಯಕ್ತಪಡಿಸಿದಳು..
ಹೀಗೆ ಓದುತ್ತ, ಅವಳಿಗೆ ಹೇಳುತ್ತಾ ನನಗೆ ಎಲ್ಲಿಲ್ಲದ ಹಾಗೇ ನಮ್ಮ ದೇಶದ ಬಗ್ಗೆ ಹೆಮ್ಮೆ ಉಂಟಾಗಿ ಬಿಟ್ಟಿತು. ಭಾರತ ಅಂದರೆ ನಾನು ಹುಟ್ಟಿದ ದೇಶ ಅನ್ನುವುದರ ಬಿಟ್ಟು ನನಗೇನೂ ಅದರ ಬಗ್ಗೆ ಹೆಚ್ಚಿನ ಮಮತೆಯಾಗಲಿ ಅಥವಾ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿ ಆಗಲಿ ಇರಲಿಲ್ಲ. ನನ್ನಲ್ಲಿ ಮಲಗಿದ್ದ ಅಭಿಮಾನವನ್ನು ಬಡಿದು ಎಬ್ಬಿಸಲು ನನ್ನ ಈಜಿಪ್ಟ್ ಗೆಳತಿ ಬರಬೇಕಾಯಿತು. ಭಾರತದ ಬಗ್ಗೆ ವಿದೇಶಿಯರ ಆಸಕ್ತಿ, ಅಭಿಪ್ರಾಯ ಬಗ್ಗೆ ಎಷ್ಟೋ ಕಡೆ ಓದಿದ್ದೇನೆ, ಕೇಳಿದ್ದೇನೆ, ನನಗೇ ಆದ ಈ ಅನುಭವ ನನಗೆ ಮರೆಯಲಾರದ ಸಂಗತಿ. ನನ್ನ ಹೊಸ ಸಮಾಜ ಪ್ರೇಮವು ಅವಳ ರಾಷ್ಟ್ರ, ಭಾಷೆ, ಜನರ ಬಗ್ಗೆಯೂ ಕೇಳಲು ಪ್ರೇರೇಪಿತವಾಯಿತು. ಈಜಿಪ್ಟಿನ ಪಿರಮಿಡ್ ಗಳು, ಮಮ್ಮಿ ಗಳು,ಅರಬ್ಬೀ ಜನರ ವಿವರ ಹಾಗೂ ಅರಬ್ಬೀ ಭಾಷೆ ಬಗ್ಗೆ ತಿಳಿಯಿತು. ಬಹಳ ಹಿಂದೆ ನಮ್ಮ ದೇಶದ ವ್ಯಾಪಾರ ಸಂಬಂಧ ಬಂದ ಅರಬ್ಬರಿಂದ ಎರವಲು ಪಡೆದ ಶಬ್ಥ ಗಳ ಪರಿಚಯ ಆಯಿತು. ಉದಾಹರಣೆಗೆ, ಕನ್ನಡದಲ್ಲಿ ಉಪಯೋಗಿಸುವ, ಹಲ್ವಾ, ಹವೆ, ಅಸಲಿ, ಹಕೀಕತ್, ಮಾಲೀಕ,ಕುರ್ಚಿ ಇತ್ಯಾದಿ. ಹಿಂದಿಯಲ್ಲಂತೂ ಲೆಕ್ಕವಿಲ್ಲದಷ್ಟು ಶಬ್ಥ ಗಳು ನುಸುಳಿವೆ. ಹೀಗೆ, ನನ್ನಲ್ಲಿ ಜಾಗೃತವಾದ ಈ ಆಸಕ್ತಿಯು ಬೇರೆ ದೇಶಗಳ ಚರಿತ್ರೆ, ಇತಿಹಾಸ, ಪರಂಪರೆಗಳ ಬಗ್ಗೆ ಕಲಿಯುವ ಮನಸ್ಸನ್ನು ಕೊಟ್ಟಿದೆ. ಈಗಲೂ ನಾನೂ ಅವಳೂ ಪರಸ್ಪರ ಹಾಗೂ ಇತರೆ ದೇಶಗಳ ಎಲ್ಲಾ ರೀತಿಯ ವಿದ್ಯಮಾನಗಳನ್ನು ಚರ್ಚಿಸುತ್ತೇವೆ. ನಾನೀಗ, ಮುಂದುವರಿದ ಮಾಹಿತಿ ತಂತ್ರಜ್ಞಾನಕ್ಕೆ ವಂದಿಸಬೇಕು ಏಕೆಂದರೆ ಈಗ ಅಂತರ್ಜಾಲಕ್ಕೆ ಲಗ್ಗೆ ಇಟ್ಟು ಬೇಕಾದಷ್ಟು ಕೂತಲ್ಲಿ, ಮಾಹಿತಿ ಸಂಪಾದಿಸಬಹುದು. ಮತ್ತೊಮ್ಮೆ ನಾನು ಸಮಾಜ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪುಸ್ತಕಗಳನ್ನು ಮನೆಗೆ ತಂದು ಓದಬೇಕಿಲ್ಲ!!!
Kama in the Vishnusahasranama
20 years ago
blog chennagide haagu olleya prayatna :)
ReplyDelete