Sunday, December 13, 2009

ನಾ ಕಂಡ ವಿದೇಶಗಳ ವಿವಿಧ ಜನ

ನಾನು ಇದುವರೆಗೂ ಇಂಗ್ಲೆಂಡ್, ಫ್ರಾನ್ಸ್ ದೇಶ ಗಳನ್ನು ಸಂದರ್ಶಿಸಿದ್ದು  ಹಾಗೂ ಈಗ ಅಮೆರಿಕೆಯಲ್ಲಿ  ವಾಸವಿದ್ದು  ನಾವು ಗಮನಿಸಿದ,ನಮ್ಮ ಸಂಪರ್ಕ ದಲ್ಲಿದ್ದ  ಕೆಲವು  ಜನರ ಬಗ್ಗೆ ಒಂದಿಷ್ಟು ವಿವರಗಳನ್ನು  ಹಂಚಿಕೊಳ್ಳುವ ಒಂದು ಬಯಕೆ. ಇಂಗ್ಲಂಡ್ ಹಾಗೂ ಫ್ರಾನ್ಸ್ ನಲ್ಲಿ ನಾನು ನೋಡಿದ್ದು, ಇದ್ದದ್ದು ತುಂಬಾ ಕಮ್ಮಿ. ನನ್ನ ಈ ಅಭಿಪ್ರಾಯಗಳು ವಾಸ್ತವಕ್ಕೆ ದೂರವಾಗಿರಬಹುದು, ಅದರೂ ನಾವಿದ್ದ ಸಂದರ್ಭದಲ್ಲಿ ನಮ್ಮ ಒಡನಾಟದಲ್ಲಿದ್ದ ಜನರ ಬಗ್ಗೆ  ನಮಗೆ ಅನ್ನಿಸಿದ್ದನ್ನು ಹಾಗೂ ನಮಗಾದ ಅನುಭವಗಳನ್ನು ಬರೆಯೋ ಪ್ರಯತ್ನ..

ಇಂಗ್ಲೆಂಡ್ :  ಈ ದೇಶದ ಜನರಲ್ಲಿ ಸ್ನೇಹಮಯಿ ಸ್ವಭಾವ ಅಷ್ಟೇನೂ ಕಾಣಬರಲಿಲ್ಲ .  ಬೇರೆ ದೇಶಗಳಿಂದ ಬರೋ ಕೆಲಸಗಾರರನ್ನು ಬೇರೆ ದೃಷ್ಟಿಯಲ್ಲಿ  ನೋಡುವ/ಕಾಣುವ  ಮನೋಭಾವದವರನ್ನು ಕಂಡೆ. ಒಂದು ಉದಾಹರಣೆ ಎಂದರೆ, ನನ್ನ ಪತಿ ತನ್ನ ಕ್ಲೈಂಟ್  ಕಚೇರಿಯನ್ನು ಕರಾರುವಾಕ್ಕಾಗಿ ೯ ಗಂಟೆಗೆ  ತಲುಪಬೇಕು ಎಂದು ಮುಂಚೆಯೇ ತಾಕೀತು ಮಾಡಿದ್ದರು, ಅವರ ಕೆಲಸದಲ್ಲಿ ಎಷ್ಟು ನಿಮಿಷ ಖಾಸಗಿ ಕರೆ ಮಾಡುತ್ತಾರೆ, ಎಷ್ಟು ಹೊತ್ತು ಮಾಡುತ್ತಾರೆ, ಊಟದ ಸಮಯ ಎಷ್ಟು ಹೊತ್ತು  ತೆಗೆದುಕೊಳ್ಳುತ್ತಾರೆ  ಎಲ್ಲವೂ ನಮೂದಾಗಬೇಕಿತ್ತು! ಇವರು ಸಾಧ್ಯವಾದಷ್ಟು ಬೇಗಲೇ ಮನೆಯನ್ನು ಬಿಡುತ್ತಿದ್ದರು. ಕಚೇರಿಯನ್ನು ತಲುಪಲು ಲಂಡನ್ ನಲ್ಲಿ ತುಂಬಾ ಜನಪ್ರಿಯವಾದ, ಹಾಗೂ ಬಹುಭಾಗ ಎಲ್ಲಾ ಜನರು ಅವಲಂಬಿಸಿರೋ ಸುರಂಗ ರೈಲನ್ನು  ( ಟ್ಯೂಬ್ ಎಂದು ಕರೆಯುತ್ತಾರೆ) ಉಪಯೋಗಿಸುತ್ತಿದ್ದರು. ಕೆಲವೊಮ್ಮೆ, ಟ್ಯೂಬ್ ಕೆಲ ನಿಮಿಷ ತಡವಾಗುವುದೋ, ಅಥವಾ ಅದು ಮಾರ್ಗ ಮಧ್ಯೆ ನಿಲ್ಲಬೇಕಾದ ಪ್ರಮೇಯ  ಬರುತ್ತಿತ್ತು. ಆಗ ೨-೩ ನಿಮಿಷ  ೯ ಗಂಟೆಗೆ ತಡವಾದರೂ,  ಇವರ ಒಬ್ಬ ಅಧಿಕಾರಿಗೆ , ಆ ೨-೩ ನಿಮಿಷ ತಡವಾದ ಕಾರಣ ಹಾಗೂ ಅದರ ವಿವರ, ದಿನಗಳು ಎಲ್ಲಾ ವಿವರಗಳನ್ನು ನೀಡಬೇಕಿತ್ತು!! ಅಷ್ಟೇ ಅಲ್ಲದೆ, ತಡವಾಗುತ್ತಿದ್ದಲ್ಲಿ ಅವರ ಮ್ಯಾನೇಜರ್ ಗೆ  ಕರೆ ಮಾಡಿ ತಿಳಿಸಬೇಕಿತ್ತು. ನಾನು ಅಲ್ಲಿದ್ದಷ್ಟು ದಿನ ಹೈಡ್ ಎನ್ನುವ  ಒಂದು ಹೆಸರಾಂತ ಉದ್ಯಾನವನದಲ್ಲಿ ಪ್ರತಿದಿನ ಓಡಾಡುವ ಅಭ್ಯಾಸವಿಟ್ಟುಕೊಂಡಿದ್ದೆ. ಅಲ್ಲಿ ಎದುರಿಗೆ ಸಿಗುವ ಜನರು ಪ್ರತಿ ಮುಳುಗ್ನಗುವುದು, ಪರಸ್ಪರ ನೋಡುವುದೂ ಬಹಳ ಕಮ್ಮಿ  ಆಗಿತ್ತು

ಫ್ರಾನ್ಸ್:
ಫ್ರಾನ್ಸ್ ಗೆ ನಾನು ಇವರ ಜೊತೆ ಹೋಗಿದ್ದು ಪ್ಯಾರಿಸ್ ಸುತ್ತಾಡಲು. ಕೇವಲ ೩ ದಿನ ಹೋಗಿದ್ದದ್ದು. ಅಷ್ಟರಲ್ಲೇ ಇವಳು ಜನರನ್ನು ಅಳೆಯುತ್ತಾಳಾ ಎಂದು ಅನ್ನಿಸೋದು ಸಹಜ. ಆದರೆ, ಆ ೩ ದಿನದಲ್ಲಿ ಕೆಲವೊಂದಿಷ್ಟು ವಿವರಗಳನ್ನು ಗಮನಿಸಿದ್ದು ಹೇಳಬಲ್ಲೆ.
ಫ್ರಾನ್ಸ್ ನ ಜನರು ಲಂಡನ್ ಜನರಿಗಿಂತ ಸ್ನೇಹ ಸ್ವಭಾವ ಕಮ್ಮಿ, ನಗಲು ತುಟಿ ಬಿರಿದರೆ ನೋವಾಗತ್ತೋ ಎನ್ನುವ ಹಾಗೆ ತೋರ ಬಂದರು.ಅವರಲ್ಲಿ ಸಂಶಯ ಪ್ರವೃತ್ತಿ, ಹುಬ್ಬು ಗಂಟಿಕ್ಕುವ  ಸ್ವಭಾವ ಹೆಚ್ಚು ಅನ್ನಿಸಿತು. ನಾವು ಲಂಡನ್ ಇಂದ ಪ್ಯಾರಿಸ್ ಗೆ  ವೇಗದ ರೈಲು ಯುರೋಸ್ಟಾರ್ ನಲ್ಲಿ ಹೋದೆವು. ಪ್ಯಾರಿಸ್ ನಿಲ್ದಾಣದಲ್ಲಿ  ಪೌಂಡ್ಸ್ ನಿಂದ  ಯುರೋಗೆ ಹಣದ ಬದಲಾವಣೆ ಮಾಡಬೇಕಿತ್ತು. ಅಲ್ಲೊಂದು ಎಕ್ಸ್ ಚೇಂಜ್ ನಲ್ಲಿ  ದುಡ್ಡು ಕೊಟ್ಟೆವು, ಅಲ್ಲಿದ್ದವನಿಗೆ ನಮ್ಮ ಮೇಲೇನೋ ಗುಮಾನಿ. ನಮ್ಮ ಪಾಸ್ಪೋರ್ಟ್ ಕೇಳಿದ, ಅದು ಸಹಜ ಎಂದು ಕೊಟ್ಟೆವು.ಅಲ್ಲಿಂದ ಶುರು ಆದ ತನಿಖೆ  ನಮ್ಮ ತಲೆ ಚಿಟ್ಟು ಹಿಡಿಸಿತು. ಲಂಡನ್ ನಲ್ಲಿರೋ ಫ್ರಾನ್ಸ್ ವೀಸಾ ಕಚೇರಿಯಲ್ಲೂ ಇಷ್ಟೊಂದು ಪ್ರಶ್ನೆ ಗಳು ನಾವು ಎದುರಿಸಲಿಲ್ಲ!!  ಆ ವ್ಯಕ್ತಿ ಹುಬ್ಬು ಗಂಟಿಕ್ಕಿಕ್ಕೊಂಡೇ ಕೊನೆಗೆ ದುಡ್ಡು ಕೊಟ್ಟ. ಹೊರಗೆ ಪ್ಯಾರಿಸ್ ನಲ್ಲಿ ಮೆಟ್ರೋ ನಲ್ಲಿ ( ಪ್ಯಾರಿಸ್ ನ "ಟ್ಯೂಬ್")  ಓಡಾಡುತ್ತಿರುವಾಗ ಜನರೆಲ್ಲ ಹುಬ್ಬು ಗಂಟಿಕ್ಕಿಕೊಂಡೇ ಸಿಕ್ಕರು. ನಗುಮುಖಗಳು ತುಂಬಾ ಕಮ್ಮಿ. ಫ್ರೆಂಚರು ತುಂಬಾ ಭಾಷಾಭಿಮಾನಿಗಳು. ಆಂಗ್ಲ ಭಾಷೆ ಬಂದರೂ, ಮಾತಾಡುವುದು ಆದಷ್ಟು ತಪ್ಪಿಸಿ ಫ್ರೆಂಚ್ ನಲ್ಲಿ ಉತ್ತರ ಕೊಡಲು ಪ್ರಯತ್ನಿಸುತ್ತಾರೆ. ನಾವೊಂದು ಕಡೆ ಊಟಕ್ಕೆ ಹೋದೆವು. ಇಂಗ್ಲಿಷ್ ಬರುತ್ತದೆಯೇ ಎಂದು ಕೇಳಿದೆವು. ಅಷ್ಟೇನೂ ಇಲ್ಲ ಅಂದ ವೈಟರ್. ಇವರು  ತಾವು ಕಲಿತಿದ್ದ ಸ್ವಲ್ಪ ಫ್ರೆಂಚ್ ( ಇವರು ಕೇವಲ  ೧ ತಿಂಗಳು ಫ್ರೆಂಚ್ ಭಾಷಾ ತರಗತಿ ಗೆ ಸೇರಿದ್ದರು, ಹಾಗೂ ೧  ತಿಂಗಳು ಒಬ್ಬರೇ ಫ್ರಾನ್ಸ್ ನಲ್ಲಿ ಕೆಲಸದ ಸಲುವಾಗಿ ಇದ್ದರು ) ಉಪಯೋಗಿಸಿ  ಕಷ್ಟಪಟ್ಟು ನಮಗೆ ಬೇಕಾದ ಖಾದ್ಯಗಳನ್ನು  ಹೇಳಿದರು, ವೈಟರ ಮಹಾಶಯನಿಗೆ ಸಂತೋಷವೋ ಸಂತೋಷ. ಆಮೇಲೆ ನೋಡಿದರೆ ಆತ ಫ್ರೆಂಚ್ ನಲ್ಲೆ  ಹರಟೆಗೆ  ಶುರುವಿಟ್ಟುಕೊಂಡ, ಸುಸ್ತಾಗಿ ನಮಗೆ ಇಂಗ್ಲಿಷ್ ಮಾತ್ರ ಬರುವುದು ಅಂತ ಹೇಳಿದರೂ ಆತ ಬಿಡಲೇ ಇಲ್ಲ. ಇಷ್ಟು ಕಲಿತಿದ್ದರೆ, ನಿಮಗೆ ಖಂಡಿತ ಫ್ರೆಂಚ್ ಚೆನ್ನಾಗಿ ಬಂದೆ ಇರುತ್ತದೆ ಅಂತ ಅವನ ವಾದ. ಕಷ್ಟಪಟ್ಟು ಅವನಿಗೆ ಅರ್ಥ ಮಾಡಿಸಿ, ತಿಂದು ಹೊರಗೆ ಬರೋ ಹೊತ್ತಿಗೆ ಸಾಕಾಗಿತ್ತು. ಆಮೇಲೆ ನಾವು ಬಡಪೆಟ್ಟಿಗೆ ನಮ್ಮ ಹರುಕುಮುರುಕು ಫ್ರೆಂಚ್ ಮಾತಾಡಲು ಸಾಹಸ ಮಾಡಲಿಲ್ಲ. ಬೇರೆಲ್ಲ ಕಡೆ ನಾವು ಇಂಗ್ಲಿಷ್ ನಲ್ಲಿ  ಮಾತಾಡಿದರೆ, ಹಾಗೂ ಹೀಗೂ ಹರುಕು ಮುರುಕು ಇಂಗ್ಲಿಷ್ ಉತ್ತರ ಸಿಕ್ಕಿತು. ಅಷ್ಟು ನಮಗೆ ಸಾಕಿತ್ತು!

ಅಮೇರಿಕಾ :  ನಾನು ಈ ದೇಶದ ಪಕ್ಷಪಾತಿ ಎಂದು ಅನ್ನಿಸಬಹುದು. ನನ್ನ ಇದುವರೆಗಿನ ಅಚ್ಚು ಮೆಚ್ಚಿನ ವಿದೇಶ ಇದು. ಇಲ್ಲಿನ ಜನರು ಸದಾ  ನಗು ಮುಖಿಗಳು, ಸ್ನೇಹಮಯಿಗಳು. ಮಾತು ಮಾತಿಗೂ ಎದುರು ಸಿಕ್ಕವರಿಗೆ  "ಹಾಯ್" "ಹಲೋ" "ಹೇಗಿದ್ದೀರಿ" " ಶುಭ ದಿವಸ/ರಾತ್ರಿ"  " ಧನ್ಯವಾದಗಳು" ಹೇಳುತ್ತಲೇ ಇರುತ್ತಾರೆ. ನಾವೂ ಕೇಳುತ್ತಿರುತ್ತೇವೆ/ ಹೇಳುತ್ತಿರುತ್ತೇವೆ. ಮೊದಲೆಲ್ಲ ಚೂರು ಚೂರಕ್ಕೂ "ಧನ್ಯವಾದಗಳು" ಹೇಳುತ್ತಿರುವುದು ಆಶ್ಚರ್ಯ ತಂದಿತ್ತು.  ಈಗ ಹೇಳಿ ಹೇಳಿ ಅಭ್ಯಾಸವಾಗಿದೆ. ಒಂದು ಅಂಗಡಿಗೆ ಹೋದರೂ, ನಮ್ಮ ಹುಡುಕಾಟದ ಮುಖಭಾವ ನೋಡಿ, ನಿಮಗೇನಾದರೂ ಸಹಾಯ ಬೇಕೇ ಎಂದು ಬಂದು ಕೇಳುತ್ತಾರೆ. ಒಂದು ದೊಡ್ಡ ಲೈನ್ ( ಇಂಡಿಯಾದ "ಕ್ಯು" ) ನಲ್ಲಿ ಕ್ಯಾಷಿಯರ್ ಬೇಸರಪಟ್ಟುಗೊಳ್ಳದೆ ಪ್ರತಿಯೋಬ್ಬರಿಗೂ " ಹಾಯ್ ಹಲೋ .... ಶುರುವಿಟ್ಟು ಕೊಳ್ಳುತ್ತಾಳೆ/ನೆ "  ಇವರ ಸಹಾಯ ಮನೋಭಾವವೂ ಹೆಚ್ಚು. ತಮಗೆ ಎಷ್ಟು ಸಾಧ್ಯವೋ ಪ್ರಯತ್ನಿಸುತ್ತಾರೆ, ಆಗದೆ ಇದ್ದಲ್ಲಿ, " ಕ್ಷಮಿಸಿ, ನನಗೆ ಗೊತ್ತಿಲ್ಲ" ಎಂದು ಉತ್ತರಿಸುತ್ತಾರೆ.

ಅಮೆರಿಕೆ ಯಲ್ಲಿ ನಾನು ಕಂಡ ಕೆಲವು ವಿವಿಧ ಜನರೆಂದರೆ,
 ಆಫ್ರಿಕನ್ ಅಮೆರಿಕನ್ನರು : ನಾವು ೨ ವರ್ಷ ಕ್ಯಾಲಿಫೋರ್ನಿಯಾ ದ ಅಲಮೀಡ ಎಂಬ ಪುಟ್ಟ ದ್ವೀಪದಲ್ಲಿ ವಾಸವಿದ್ದೆವು.ಆ ದ್ವೀಪದಿಂದ ಕೇವಲ ೫ ಮೈಲಿ ದೂರದಲ್ಲಿ  ಓಕ್ ಲ್ಯಾಂಡ್ ನಲ್ಲಿ  ಈ ಜನರ ಸಂಖ್ಯೆ ತುಂಬಾ ಜಾಸ್ತಿ. ಇಡೀ ಕ್ಯಾಲಿಫೋರ್ನಿಯಾದಲ್ಲಿ  ಈ ಜಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಇವರ ವಾಸ. ನಾನಿಲ್ಲಿ  ಬಂದ ಹೊಸತರಲ್ಲಿ ಇವರನ್ನು ಕರಿ ಜನ ( ಬ್ಲ್ಯಾಕ್ಸ್ ) ಎಂದು ಹೇಳಲು ಶುರು ಮಾಡಿದಾಗ, ನನ್ನವರು ಗಂಭೀರವಾಗಿ ಎಚ್ಚರಿಸಿದರು, ಈ ಜನರನ್ನು ಮರ್ಯಾದಾಯುತವಾಗಿ "ಆಫ್ರಿಕನ್ ಅಮೆರಿಕನ್ನರು" ಎನ್ನಬೇಕು ಎಂದು. ಇಲ್ಲದೆ ಇದ್ದಲ್ಲಿ ಅವರಲ್ಲಿ ಕೆಲವರಿಗೆ  ಅದು ಅವಮಾನ ಮಾಡಿದ ಹಾಗೆ, ಆಮೇಲೆ ಗಲಾಟೆಗೆ ಬಂದುಬಿಟ್ಟಾರು ಎಂದು! ಆಫ್ರಿಕಾದಿಂದ ಗುಲಾಮರಾಗಿ  ಬಂದ ಜನ ಈಗ  ಹಂತ ಹಂತವಾಗಿ ಮೇಲೇರಿ  ಅಮೇರಿಕಾದ ಕೆಲವು  ಅತ್ಯುನ್ನತ ಸ್ಥಾನಗಳಲ್ಲಿ ಅಲಂಕರಿಸುವ  ಮಟ್ಟಕ್ಕೆ ಬಂದ ಹಾದಿ  ಬಹು ಪರಿಶ್ರಮದ ಹಾಗು ಕಠಿಣತಮವಾದದ್ದು. ನಾನು ನೋಡಿದ  ಈ  ಜನರಲ್ಲಿ  ಕೆಲವರು  ಭಾರೀ ಮೈಯ ಧಡೂತಿಯರು. ಈ  ಭಾರೀ ಗಾತ್ರ ಅವರ ವಂಶವಾಹಿಗಳಲ್ಲೇ ಇದೆಯೇನೋ. ಕೆಲವು ಪುಟ್ಟಹುಡುಗರು/ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಸಹಾ ಡುಮ್ಮಿ/ಡುಮ್ಮಣ್ಣ ಗಳಾಗಿದ್ದರು. ಕೆಲ ಹೆಂಗಸರಿಗೆ  ತಮ್ಮ ಕೂದಲನ್ನು ಅಸಂಖ್ಯಾತ ಪುಟ್ಟ ಜಡೆ ಗಳಾಗಿ ಮಾಡಿಸಿಕೊಳ್ಳುವುದು ಒಂದು ಹವ್ಯಾಸ.ಇದಕ್ಕೆ ಬ್ರೈಡಿಂಗ್ ಎಂದು ಕರೆಯುತ್ತಾರೆ . ಈ ಜಡೆಗಳು ಕೂದಲಿನ ಬುಡದಿಂದ ಶುರು ಆಗುತ್ತವೆ. ಜಡೆಗಳ ತುದಿಗೆ ಕೆಲವೊಮ್ಮೆ ಬಣ್ಣ ಬಣ್ಣದ ರಿಬ್ಬನ್ ಕಟ್ಟುತ್ತಾರೆ. ನಮ್ಮಲ್ಲಿ ಒಂದು ಜಡೆ ಹೆಣೆದುಕೊಳ್ಳಲು ಬೇಜಾರು ಆಗಿ, ಚಿಕ್ಕ ಬಾಬ್ ಕಟ್, ಬಾಯ್ ಕಟ್ ಮಾಡಿಕೊಳ್ಳುವ ಹುಡುಗಿಯರೇ ಹೆಚ್ಚು ಹೀಗಿರುವಾಗ, ಈ ಜಡೆ ಹಾಕುವವರಿಗೆ, ಹಾಕಿಸುಕೊಳ್ಳುವವರಿಗೆ ಇಡೀ ಪ್ರಪಂಚದಲ್ಲಿ ಅತ್ಯಂತ ತಾಳ್ಮೆಯ ಜನರು ಎಂದು ಪ್ರಶಸ್ತಿ ಕೊಡಬೇಕು ಎಂದು ನನಗೆ ಅನ್ನಿಸಿತು!  ಈ ಜಡೆ ಹವ್ಯಾಸ ತುಂಬಾ ಖರ್ಚು ಕೊಡುವುದೆಂದೂ, ಹೆಂಗಸರು ತಮ್ಮ ಗಳಿಕೆಯಲ್ಲಿ ಹೆಚ್ಚು ಭಾಗ ಇದಕ್ಕೆ ಸುರಿಯುವರೆಂದೂ ಒಂದು ಟಿ.ವಿ ಚಾನೆಲ್ ನಲ್ಲಿ ಕೇಳಿದ್ದೆ. ಈ ಜನರ ಆಂಗ್ಲ ಭಾಷಾ ಉಚ್ಛಾರಣೆ ಶೈಲಿಯೇ ಬೇರೆ. ಬಹಳ ವೇಗವಾಗಿ, ಪದಗಳನ್ನು ನುಂಗಿ ತಮ್ಮದೇ ಆದ ಧಾಟಿಯಲ್ಲಿ ಮಾತಾಡುವುದರಲ್ಲಿ ನಿಷ್ಣಾತರು. ಇವರಲ್ಲಿ ಕೆಲವರು ಗಂಡಸರು ಕೆಲವೊಮ್ಮೆ  ತಮ್ಮದೇ ಆದ ವಿಚಿತ್ರ ವೇಷ ಭೂಷಣ ಗಳಿಂದ ಗಮನ ಸೆಳೆಯುತ್ತಾರೆ. ಅಗತ್ಯಕ್ಕಿಂತ ದೊಗಲೆ,ಮಂಡಿ ತನಕ ಬರೋ ಶರ್ಟ್ ಗಳು, ಪ್ಯಾಂಟ್ ಗಳು ಅಂತೂ ಅರ್ಧ ತೊಡೆ ವರೆಗೂ ಇಳಿದುಬಿಟ್ಟಿರುತ್ತದೆ, ಹಾಗೆ ಸರ್ಕಸ್ ಮಾಡುತ್ತಾ, ಅಥವಾ ಒಂದು ಕೈ ನಲ್ಲಿ ಜೋತಾಡುತ್ತಿರುವ ಪ್ಯಾಂಟನ್ನು ಮೇಲಕ್ಕೆತ್ತಿ, ನಡೆಯುತ್ತಾರೆ. ಏನಿದು ಅವಸ್ಥೆ ಅನ್ನಿಸುತ್ತದೆ ಆದರೆ ಅವರಿಗೆ ಅದೇ ಒಂದು ರೀತಿಯ ಮಜಾ!! ಮತ್ತೊಂದಿಷ್ಟು ಜನರು ತಮ್ಮ ಟೋಪಿಗಳು, ಜಾಕೆಟ್ ಗಳಲ್ಲಿ ಕೊಂಡಾಗ ಅವುಗಳ ಬೆಲೆ ನಮೂದಾಗಿರೋ ಟ್ಯಾಗ್ ಗಳನ್ನು  ಹಾಗೇ ಬಿಟ್ಟು  ನೇತಾಡಿಸುತ್ತಾ  ಓಡಾಡುತ್ತಾರೆ. ಕೆಲ ಜನರು ತಮ್ಮ  ವಾಹನಗಳ ಚಕ್ರಗಳನ್ನು ತುಂಬಾ ದಪ್ಪಗೆ, ಎತ್ತರಕ್ಕೆ ಹಾಗೂ ಥಳ ಥಳ ಹೊಳೆಯುವಂತೆ ಮಾಡಿಸಿಕೊಳ್ಳುತ್ತಾರೆ, ಅದು ಹೇಗೆ ವಾಹನದ ಬಾಗಿಲನ್ನು ತೆಗೆದು ಸೀಟ್ ಮೇಲೆ ಕೂರುತ್ತಾರಪ್ಪ  ಎನ್ನಿಸುತ್ತದೆ. ಕೆಲವರ  ಹವ್ಯಾಸ ಏನು ಅಂದರೆ ತಮ್ಮ ಗುಂಪಲ್ಲಿ ಜೋರಾಗಿ ಮಾತಾಡುವುದು, ವಾಹನಗಳಲ್ಲಿ ಅಬ್ಬರದ ಸಂಗೀತ ( ಸಾಮಾನ್ಯ ವಾಗಿ ರಾಪ್ ಸಂಗೀತ )ಎಲ್ಲರಿಗೂ ಕೇಳುವ ಹಾಕಿ ಓಡಿಸುವುದು. ಒಟ್ಟಿನಲ್ಲಿ ಈ ಜನಾಂಗ ಈ ದೇಶದಲ್ಲಿರುವ ಜನರಿಗಿಂತ ಭಿನ್ನರು, ತಮ್ಮದೇ ಆದ ವಿಶಿಷ್ಟತೆಯುಳ್ಳವರು.

ಮೆಕ್ಸಿಕನ್ ಅಮೆರಿಕನ್ನರು:
ಈ ಜನರಲ್ಲಿ ಕೆಲವರನ್ನು ನೋಡಿದರೆ ನಮ್ಮ ದೇಶದವರ ಹಾಗೆ ಮೈ ಬಣ್ಣ, ಮುಖ ಚರ್ಯೆ ಕಾಣುತ್ತದೆ. ಅಮೇರಿಕಾದ ಕೆಳಗಿನ ದೇಶ ಮೆಕ್ಸಿಕೋದಿಂದ  ಬರುವ ಈ ಜನರಲ್ಲಿ ಹೆಚ್ಚು ಭಾಗ ಅಮೇರಿಕಾ ದಲ್ಲಿ ತುಂಬಾ ಕಮ್ಮಿ ಖರ್ಚಿಗೆ ಸಿಗುವ ಕೆಲಸಗಾರರಾಗುತ್ತಾರೆ. ಅಂಗಡಿಗಳಲ್ಲಿ ,ಉಪಾಹಾರ ಕೇಂದ್ರಗಳಲ್ಲಿ, ರಿಪೇರಿ ಕಾರ್ಯಗಳಲ್ಲಿ,  ಕೆಲವೆಡೆ  ಚಾಲಕರಾಗಿ ಇತ್ಯಾದಿ ಜಾಗಗಳಲ್ಲಿ ಸಹಾಯಕರಾಗಿ ದುಡಿಯುತ್ತಾರೆ. ನಾವೊಮ್ಮೆ ಕ್ಯಾಲಿಫೋರ್ನಿಯಾದ  ಸ್ಯಾನ್ ಹೋಸೆ ನಲ್ಲಿರುವ " ಶರವಣ ಭವನ್ " ಎಂಬ ಉಪಾಹಾರ ಕೇಂದ್ರಕ್ಕೆ ಹೋದೆವು. ಶರವಣ ಭವನ್ ತನ್ನ ರುಚಿಯಾದ ಅಡುಗೆಗಳಿಂದ ಪ್ರಪಂಚದಲ್ಲೆಡೆ ಖ್ಯಾತಿ ಪಡೆದಿದ್ದು, ಕೆಲವು ದೇಶಗಳಲ್ಲಿ ಶಾಖೆಗಳೂ ಇವೆ. ನಮಗೆ ಸ್ವಾಗತಿಸಿದ್ದು, ಟೇಬಲ್ ತೋರಿದ್ದು, ಮೆನು ಬರೆದುಕೊಂಡಿದ್ದು, ಬಿಲ್ ಕೊಟ್ಟದ್ದು, ಇಸಿದುಕೊಂಡದ್ದು ಭಾರತೀಯರೆ.ಆದರೆ ನಮ್ಮೆದುರಿಗೆ ಕಾಣುವ ಹಾಗಿದ್ದ ಅಡುಗೆ ಮನೆಯಲ್ಲಿ ಮೆಕ್ಸಿಕನ್ ಜನರು ಅಚ್ಚುಕ್ಕಟ್ಟಾಗಿ ದೋಸೆ ಹುಯ್ಯುತ್ತಿದ್ದರು, ನಾನಾ ವಿಧವಾದ ಅಡುಗೆಗಳನ್ನು ಮಾಡುತ್ತಿದ್ದರು!!!
ಮತ್ತೊಮ್ಮೆ ಲಿವೆರ್ ಮೋರ್  ಎಂಬಲ್ಲಿ ಇರುವ ಸೊಗಸಾದ ಶಿವ- ವಿಷ್ಣು ದೇವಾಲಯಕ್ಕೆ ಹೋದೆವು, ಅಲ್ಲಿ ದೇವಾಲಯದ ಆವರಣ, ಒಳ ಭಾಗ ಚೊಕ್ಕಟದಲ್ಲಿಯೂ  ಮೆಕ್ಸಿಕನ್ನರು ಕಾಣಬಂದರು. ರುಚಿಯಾದ ಘಮ ಘಮ ಪ್ರಸಾದ ತಯಾರಿಸಿದ್ದೂ  ಅವರೇ! ಈ ಜನ ಉದರ ನಿರ್ವಹಣೆಗೆ ಎಂಥಾ ಕೆಲಸಕ್ಕೂ ಸೈ. ತುಂಬಾ ಕಷ್ಟಪಟ್ಟು ದುಡಿದು, ಹಣ ಗಳಿಸುತ್ತಾರೆ.

ಚೈನೀಸ್  ಅಮೆರಿಕನ್ನರು:  ಚೈನೀಸ್ ಗಳು ನನಗೆ ಜಪಾನೀಯರ ಹಾಗೆ ತುಂಬಾ ಚುರುಕು ಬುದ್ಧಿಯವರ ಹಾಗೆ ಕಂಡು ಬರುತ್ತಾರೆ ಹಾಗೂ ತುಂಬಾ ಜೋರು ಸ್ವಭಾವದವರು ಎನ್ನಿಸಿತು. ಓಕ್ ಲ್ಯಾಂಡ್ ನಲ್ಲಿ ಒಂದು ಚೈನೀಸ್ ಮಾರುಕಟ್ಟೆ ಇದೆ. ಅಲ್ಲಿ ನಾನಾ ತರವಾದ ತರಕಾರಿ, ಹಣ್ಣು, ಮಾಂಸಾಹಾರ ಪದಾರ್ಥಗಳು, ಉಪಹಾರ ಕೇಂದ್ರಗಳು ಇತ್ಯಾದಿ ಇವೆ. ಅಲ್ಲಿ ಓಡಾಡುವಾಗ, ಈ ಚೈನೀಸ್ ಗಳ ಮುಖ್ಯವಾಗಿ ಅಜ್ಜ-ಅಜ್ಜಿ ಯರ ಮಾತುಗಳು ಜೋರು ಜೋರಾಗಿ ಇರುತ್ತಿತ್ತು. ಪಕ್ಕದಲ್ಲಿ ಯಾರಿದ್ದಾರೆ ಯಾರಿಲ್ಲ ನೋಡದೆ ದನಿ ಏರಿಸಿದ  ಮಾತುಗಳ ಭರಾಟೆ ಇರುತ್ತಿತ್ತು. ಬಸ್ ಗಳಲ್ಲಿ ಸಾಮಾನ್ಯ ವಾಗಿ ಕುಳಿತಿರುವವರು ತುಂಬಾ ನಿಶ್ಯಬ್ಧ ವಾಗಿ ಇರುತ್ತಾರೆ, ಈ ಚೈನೀಸ್ ಗಳು ಗುಂಪು ಗುಂಪಲ್ಲಿ ಬಂದರೆ ಇಡೀ ಬಸ್ ಕೇಳೋ ಹಾಗೆ ನಗು,ಕೇಕೆ, ಜೋರು ದನಿ ಯಲ್ಲಿ ಮಾತು, ವಾಗ್ವಾದ ಎಲ್ಲಾ ಮಾಡುತ್ತಿದ್ದರು. ಇವರು ಅಷ್ಟೇನೂ ಹಸನ್ಮುಖಿಗಳಲ್ಲ ಎಂದು ನನಗೆ ತೋರಬಂತು.

ದೇಶ ಸುತ್ತು, ಕೋಶ ಓದು ಅನ್ನೋ ಗಾದೆಯೇ ಇದೆ. ಇಡೀ ಜನ್ಮವಿಡೀ ಸುತ್ತಿದರೂ ಮುಗಿಯದಷ್ಟು ಸುಂದರ ಜಾಗಗಳು ಇವೆ. ವೈವಿಧ್ಯಮಯ ಜನರು ಹಾಗೂ ಅವರ ಸಂಸ್ಕೃತಿಗಳಿವೆ. ಜೀವಮಾನದಲ್ಲಿ ಎಷ್ಟು ಆಗತ್ತೋ ಅಷ್ಟು  ನೋಡಲು ನನಗೆ ಇಷ್ಟ. ಈ ವಿಶಾಲವಾದ ಪ್ರಪಂಚದಲ್ಲಿ ಮತ್ತಷ್ಟು ವಿದೇಶಗಳ ವಿವಿಧ ಜನರನ್ನು ನೋಡುವ ಅವಕಾಶ ಸಿಕ್ಕರೆ ನಾನು ಧನ್ಯೆ! :)

Sunday, October 25, 2009

ಸಮಾಜ ಶಾಸ್ತ್ರ ಹಾಗೂ ನನ್ನ ಈಜಿಪ್ಟ್ ಗೆಳತಿ

ನಾನು ಸುಮಾರು ವರ್ಷಗಳಿಂದ ಅಮೆರಿಕೆಯಲ್ಲಿ ಇದ್ದು, ಕೆಲವೊಮ್ಮೆ  ನನ್ನವರ ಕಂಪನಿ ಪಾರ್ಟಿಗಳಿಗೆ ಹೋಗಿದ್ದೇನೆ, ಅಲ್ಲಿ ಇವರ ವಿದೇಶಿ ಗೆಳೆಯ ಗೆಳತಿಯರನ್ನು ಮಾತಾಡಿಸಿದ್ದೇನೆ. ಅವರೂ ಒಂದಿಷ್ಟು ಭಾರತದ ಬಗ್ಗೆ ಕೇಳಿದ್ದಾರೆ, ಹೇಳಿದ್ದೇನೆ. ಅಲ್ಲಿಗೆ ಮುಗಿದಿತ್ತು. ಇತ್ತೀಚೆಗೆ, ನನಗೆ ಪರಿಚಯವಾದ ಈಜಿಪ್ಟ್ ಮೂಲದ ಗೆಳತಿ ಬಹಳ ಕುತೂಹಲ ಸ್ವಭಾವದವಳು. ಅವಳಿಗೆ  ಸಮಾಜಶಾಸ್ತ್ರ ಭಾರೀ ಇಷ್ಟ. ನಾನೋ, ಸಮಾಜ ಶಾಸ್ತ್ರ ಅಂದರೆ ಮೈಲು ದೂರ ಓಡುವವಳು. ಚಿಕ್ಕವಳಿದ್ದಾಗ, ಹಾಗೂ ಹೀಗೂ ಸಮಾಜಶಾಸ್ತ್ರ ವನ್ನು ಒಂದು "ಶಾಸ್ತ್ರ" ವಾಗಿ ಓದಿ, ಉರು ಹೊಡೆದು ತೇರ್ಗಡೆ ಆಗಿ ನಿಟ್ಟುಸಿರುಬಿಟ್ಟವಳು .

ನನ್ನ ಗೆಳತಿ ಪ್ರತಿ ದಿನ ಭಾರತ ದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹಾಕುತ್ತಿದ್ದಳು. ಎಷ್ಟೆಲ್ಲ ಕ್ಲಿಷ್ಟ ಪ್ರಶ್ನೆಗಳು, "ಭಾರತ" ಹೆಸರು ಹೇಗೆ ಬಂತು, ಬ್ರಿಟಿಷರ ಆಳ್ವಿಕೆ, ಪಾಕಿಸ್ತಾನ್-ಬಾಂಗ್ಲಾ ವಿಭಜನೆ, ಗಾಂಧೀ, ಹಿಂದೂಗಳು, ಅವರ ಜಾತಿಗಳು,ಉಪಜಾತಿಗಳು, ಮರಿ ಜಾತಿಗಳು, ಭಾಷೆಗಳು, ವೇದ ಗಳು,ವರ್ಣಭೇದಗಳು, ಸಂಸ್ಕಾರ, ಹಬ್ಬಗಳು, ಅಸಂಖ್ಯಾತ ದೇವರುಗಳು, ಕೋಮುವಾದ, ದಲಿತರ ಬಗ್ಗೆ ಕೀಳು ಮನೋಭಾವ , ಹಿಂದೂ-ಮುಸ್ಲಿಂ ಗಲಾಟೆ, ಬಾಬರಿ ಮಸೀದಿ ಗಲಾಟೆ, ಈಗಿನ ರಾಜಕೀಯ ಪರಿಸ್ಥಿತಿ, ಭೃಷ್ಟ ರಾಜಕಾರಣಿಗಳು ಹೀಗೆ ಒಂದೇ-ಎರಡೇ ೧೦೦ ಪ್ರಶ್ನೆಗಳು.  ಅವಳಿಗೆ ಸರಿಯಾಗಿ ಹೇಳಲು ನಾನು ತಡಬಡಾಯಿಸಿದ್ದು , ನನ್ನ ಮರ್ಯಾದೆ ಮಣ್ಣು ಪಾಲಾಗಬಾರದು ಎಂದು "ವಿಕಿಪೀಡಿಯ" ದಲ್ಲಿ ಮತ್ತೆ  ಮನದಲ್ಲಿ ಎಂದೋ "ಗುಡ್ ಬೈ" ಹೇಳಿದ್ದ ಸಮಾಜ ಶಾಸ್ತ್ರ ವನ್ನು ಓದಲು ಶುರು ಮಾಡಿದ್ದೂ ಆಯಿತು.. ಓದಿದ್ದನ್ನ, ಸರಳ ವಾಗಿ ಅವಳಿಗೆ ಅರ್ಥವಾಗುವ ಹಾಗೆ  ಹೇಳಲು ಹರ ಸಾಹಸ ಮಾಡಿದ್ದೂ ಆಯಿತು. ಅವಳ ಆಶ್ಚರ್ಯಕ್ಕೆ ಪಾರವೇ ಇಲ್ಲ.  ಕೇವಲ ಒಂದು ದೇಶದಲ್ಲಿ  ಜನ, ಸಂಸ್ಕೃತಿ, ಭಾಷೆ, ಹಾಗೂ ಆಹಾರ ಇಷ್ಟೊಂದು ವೈವಿಧ್ಯತೆಯಿರಲೂ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳು ಇಟ್ಟಳು. ಹಾಗೂ ಮುಂದೊಮ್ಮೆ  ಭಾರತಕ್ಕೆ ಭೇಟಿ ನೀಡುವ ಇಚ್ಛೆ ಯನ್ನೂ ವ್ಯಕ್ತಪಡಿಸಿದಳು..

ಹೀಗೆ ಓದುತ್ತ, ಅವಳಿಗೆ ಹೇಳುತ್ತಾ ನನಗೆ ಎಲ್ಲಿಲ್ಲದ ಹಾಗೇ ನಮ್ಮ ದೇಶದ ಬಗ್ಗೆ ಹೆಮ್ಮೆ ಉಂಟಾಗಿ ಬಿಟ್ಟಿತು. ಭಾರತ ಅಂದರೆ ನಾನು ಹುಟ್ಟಿದ ದೇಶ ಅನ್ನುವುದರ ಬಿಟ್ಟು ನನಗೇನೂ ಅದರ ಬಗ್ಗೆ ಹೆಚ್ಚಿನ ಮಮತೆಯಾಗಲಿ ಅಥವಾ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿ ಆಗಲಿ ಇರಲಿಲ್ಲ. ನನ್ನಲ್ಲಿ ಮಲಗಿದ್ದ ಅಭಿಮಾನವನ್ನು  ಬಡಿದು ಎಬ್ಬಿಸಲು ನನ್ನ ಈಜಿಪ್ಟ್ ಗೆಳತಿ ಬರಬೇಕಾಯಿತು. ಭಾರತದ ಬಗ್ಗೆ  ವಿದೇಶಿಯರ ಆಸಕ್ತಿ, ಅಭಿಪ್ರಾಯ ಬಗ್ಗೆ ಎಷ್ಟೋ ಕಡೆ ಓದಿದ್ದೇನೆ, ಕೇಳಿದ್ದೇನೆ, ನನಗೇ ಆದ ಈ ಅನುಭವ ನನಗೆ ಮರೆಯಲಾರದ ಸಂಗತಿ.  ನನ್ನ ಹೊಸ ಸಮಾಜ ಪ್ರೇಮವು ಅವಳ ರಾಷ್ಟ್ರ, ಭಾಷೆ, ಜನರ  ಬಗ್ಗೆಯೂ ಕೇಳಲು ಪ್ರೇರೇಪಿತವಾಯಿತು. ಈಜಿಪ್ಟಿನ ಪಿರಮಿಡ್ ಗಳು, ಮಮ್ಮಿ ಗಳು,ಅರಬ್ಬೀ ಜನರ ವಿವರ ಹಾಗೂ ಅರಬ್ಬೀ ಭಾಷೆ ಬಗ್ಗೆ ತಿಳಿಯಿತು. ಬಹಳ ಹಿಂದೆ ನಮ್ಮ ದೇಶದ ವ್ಯಾಪಾರ ಸಂಬಂಧ ಬಂದ ಅರಬ್ಬರಿಂದ ಎರವಲು ಪಡೆದ ಶಬ್ಥ ಗಳ ಪರಿಚಯ ಆಯಿತು. ಉದಾಹರಣೆಗೆ, ಕನ್ನಡದಲ್ಲಿ ಉಪಯೋಗಿಸುವ, ಹಲ್ವಾ, ಹವೆ, ಅಸಲಿ, ಹಕೀಕತ್, ಮಾಲೀಕ,ಕುರ್ಚಿ ಇತ್ಯಾದಿ. ಹಿಂದಿಯಲ್ಲಂತೂ ಲೆಕ್ಕವಿಲ್ಲದಷ್ಟು ಶಬ್ಥ ಗಳು ನುಸುಳಿವೆ. ಹೀಗೆ, ನನ್ನಲ್ಲಿ ಜಾಗೃತವಾದ ಈ ಆಸಕ್ತಿಯು ಬೇರೆ ದೇಶಗಳ ಚರಿತ್ರೆ, ಇತಿಹಾಸ, ಪರಂಪರೆಗಳ ಬಗ್ಗೆ ಕಲಿಯುವ ಮನಸ್ಸನ್ನು ಕೊಟ್ಟಿದೆ. ಈಗಲೂ ನಾನೂ ಅವಳೂ ಪರಸ್ಪರ ಹಾಗೂ ಇತರೆ ದೇಶಗಳ ಎಲ್ಲಾ ರೀತಿಯ ವಿದ್ಯಮಾನಗಳನ್ನು  ಚರ್ಚಿಸುತ್ತೇವೆ. ನಾನೀಗ, ಮುಂದುವರಿದ ಮಾಹಿತಿ ತಂತ್ರಜ್ಞಾನಕ್ಕೆ ವಂದಿಸಬೇಕು ಏಕೆಂದರೆ ಈಗ ಅಂತರ್ಜಾಲಕ್ಕೆ ಲಗ್ಗೆ ಇಟ್ಟು ಬೇಕಾದಷ್ಟು ಕೂತಲ್ಲಿ, ಮಾಹಿತಿ ಸಂಪಾದಿಸಬಹುದು. ಮತ್ತೊಮ್ಮೆ ನಾನು  ಸಮಾಜ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪುಸ್ತಕಗಳನ್ನು  ಮನೆಗೆ ತಂದು  ಓದಬೇಕಿಲ್ಲ!!!